ಅಳುಗುಳಿ ಮಣೆ ಒಂದು ಕಿರು ಪರಿಚಯ ಭಾಗ-೧ 

ಅಳುಗುಳಿ ಮಣೆ ಒಂದು ಕಿರು ಪರಿಚಯ ಭಾಗ-೧ 

ಅಳುಗುಳಿಮನೆ ಅಂತಾ ಓದಿದ ತಕ್ಷಣ ಖಂಡಿತ ನಿಮೆಲ್ಲರ ಸವಿ ಸವಿ ನೆನಪುಗಳು, ಅಜ್ಜಿ, ಅಮ್ಮಮ್ಮ, ಪಾಟಿ, ಅಚ್ಚಮ್ಮ, ನಾನಿ, ಅಮ್ಮನ ಜೊತೆ ಆಟ ಆಡಿದ ಕ್ಷಣಗಳು ಉಕ್ಕರಿಸಿ ಬರುತ್ತಿದೆ ಅಲ್ವಾ! ಇದು ನಮ್ಮ ಪ್ರಾಚೀನ ಭಾರತದ ಅಬಾಕಸ್ ಅಂದ್ರೆ ತಪ್ಪೇನಿಲ್ಲ. ಇಂದು,  ನಮ್ಮೆಲ್ಲರ ತಲೆ ಬಿಸಿಮಾಡದೆ ತಲೆಗೆ ಕೆಲಸ ಕೊಡುವ ಆಟ, ಮನಸ್ಸಿಗೆ ಮುದ ನೀಡುವ ಆಟ..  ದಕ್ಷಿಣ ಭಾರತದಲ್ಲಿ ಪ್ರಮುಖವಾಗಿ ಹಾಸು ಹೊಕ್ಕಾದ, ನಮ್ಮೆಲ್ಲರ ಬಾಲ್ಯದ ನೆನಪುಗಳಲ್ಲಿ ಒಂದಾದ ಅಳುಗುಳಿಮನೆ ಆಟದ ಬಗ್ಗೆ ಒಂದು ಕಿರು ಪರಿಚಯ.

ಅಲುಗುಳಿ ಮಣೆಯು ಮರ, ಹಿತ್ತಾಳೆ, ಕಲ್ಲುಗಳಲ್ಲಿ ಕೆತ್ತಿರುವುದು ನೋಡಬಹುದು. ಏನು ಇಲ್ಲದಿದ್ದರೂ ನೆಲದ ಮೇಲೆ ವೃತ್ತ ಬರೆದು ಆಡಬಹುದು. ಮಣೆಯ ಗುಂಡಿಗಳಿಗೆ ಗುಂತಲು, ಕುಳಿ, ಗೋಟು,ಗುಣಿ , ಹಳ್ಳ ಎನ್ನುವುದುಂಟು. 

ಅಳುಗುಳಿ ಮಣೆ  ಆಟವನ್ನ ಚನ್ನೇ ಮಣೆ, ಚನ್ನ ಮಣೆ, ಅಳುಗುಳಿಮಣೆ, ಗುಳಿ ಮನೆ, ಗೋಟಿ ಮಣೆ , ಹರಳು ಮಣೆ, ಹರಳು ಮನೆ, ಹಳಗುಣಿ ಮಣೆ , ಹಳ್ಳಗುಳ್ಳಿ ಮನೆ, ಪತ್ತ ಮಣೆ, ಕುಡ್ಗೊಳ್ ಮಣಿ  ಪಂಥಮಣಿ Gotgoni ಅಂತೆಲ್ಲ ಕರ್ನಾಟಕದಲ್ಲಿ ಕರೆಯುವುದು.

ಆಂಧ್ರದಲ್ಲಿ - వాన-గుంతల పీట, వామన గుంటలు, ವಾಮನ ಗುಂತಲು, ವಾನಗಲ್ಲ ಪೀಠ, ವಾಮನ ಗುಂಟ ಪೀಠ,

ಕೊಂಕಣಿ ಪ್ರದೇಶದಲ್ಲಿ ಗುರಪಾಲೆ , ಗುರ್ಪಲೆ, gurpale 

ತಮಿಳ್ ನಾಡಿನಲ್ಲಿ பல்லாங்குழி  ಪಲ್ಲಂಕುಜ್ಹಿ, ಪಲ್ಲಂಗುಜ್ಹಿ  

ಕೇರಳದಲ್ಲಿ പല്ലാങ്കുഴി ಕುಜ್ಹಿಪರ

ರಾಯಲಸೀಮೆ ಪ್ರದೇಶದಲ್ಲಿ ಗೋಟುಗುಣಿ ಆಟ,  

ಕಾಸರಗೋಡು ಪ್ರದೇಶದಲ್ಲಿ ಕಾಡಿ (Kaadi) ಆಟ,

ತುಳು ಭಾಷೆಯಲ್ಲಿ ಚೆನ್ನೆಮಣೆಗೊಬ್ಬಡು ಅಂತ ಕರೆಯುತ್ತಾರೆ. 

ಕರ್ನಾಟಕದಲ್ಲಿ, ತಮಿಳುನಾಡಿನಲ್ಲಿ ಒಂದು ಬದಿಗೆ ೭ ಗುಣಿ ಒಟ್ಟು ೧೪ ಗುಣಿಗಳಿರುವ ಮಣೆಯನ್ನು ಸಾಮಾನ್ಯವಾಗಿ ಕಾಣಬಹುದು. ಆಂಧ್ರದಲ್ಲಿ ಒಂದು ಬದಿಗೆ ೫ ಮತ್ತು ೭ ಗುಣಿ ಒಟ್ಟು ೧೦ ಮತ್ತು ೧೪ ಗುಣಿಗಳಿರುವ ಚನ್ನೆಮಣೆಯ ಮಣೆಯನ್ನು ಸಾಮಾನ್ಯವಾಗಿ ಕಾಣಬಹುದು. ನದಿಯ ತಟದಲ್ಲಿ, ಬಂಡೆಯ ಮೇಲೆ, ಐತಿಹಾಸಿಕ ಸ್ಥಳಗಳಲ್ಲಿ, ದೇವಾಲಯದ ಪ್ರಾಂಗಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗುಳಿಗಳು ಇರುವುದು ಸಹ ಕಾಣಬಹುದು. ಭಾರತ ದೇಶದಲ್ಲಿ ಗುಳಿಗಳು ಬೆಸ ಸಂಖ್ಯೆಯಲ್ಲಿ ಅಂದರೆ, ೯-೧೧-೧೫-೨೧ ಗುಣಿಗಳಲ್ಲಿ ಇರುತ್ತದೆ. ಬೇರೆ ದೇಶ ಮತ್ತು ಖಂಡಗಳಲ್ಲಿ ಸಮಸಂಖ್ಯೆಯಲ್ಲಿ ಗುಳಿಗಳು ಇರುವುದನ್ನು ಕಾಣಬಹುದು. ಹಾಗೆಯೇ ಇದಕ್ಕೆ ಉಪಯೋಗಿಸುವ ಕಾಯಿಗಳು ಸಹ ವಿಧ ವಿಧ i.e. ಕವಡೆ, ಚನ್ನೇ ಕಾಯಿ, ಹೊಂಗೆ ಮರದ ಬೀಜ, ಗುಲಗಂಜಿ, ಮಂಜೊಟ್ಟಿ , ಮಂಜಾಡಿ, ಹುಣಸೆಬೀಜ, ಹುರಳಿಕಾಳು ಇತ್ಯಾದಿ. ಏನು ಇಲ್ಲವೇ, ಕಡಲೆಬೀಜ/ ಶೇಂಗಾಬೀಜ ಸಹ ಉಪಯೋಗಿಸಬಹುದು. ಆಟದಲ್ಲಿ ಗೆದ್ದವರಿಗೆ ಬೀಜ ಅಂತ ಪಣ ಕೂಡ ಇರುತ್ತಿತ್ತು.

ಇನ್ನು ಆಟಗಳ ಹೆಸರು, ಪ್ರಕಾರವಂತೂ ಒಂದಕ್ಕಿಂತ ಒಂದು ರೋಚಕ. ಕಾಯಿಗಳನ್ನು ಎತ್ತುವ ಮನೆ, ಬಿಡುವ ಪ್ರಕಾರದಲ್ಲಿ, ಬಾಚಿಕೊಳ್ಳುವ ಮನೆ ರೀತಿಯಲ್ಲಿ ಬೇರೆ ಬೇರೆ ಆಟದ ಪ್ರಕಾರವಿದೆ. ಸುಮಾರು ೨೦ಕ್ಕಿಂತ ಹೆಚ್ಚು ಆಟಗಳು ಇದೆ. ಸಾದಾ ಆಟ, ಪತ್ತದ ಆಟ, ಜೋಡಿ ಪತ್ತದ್ ಆಟ, ಕರು ಹಾಕುವ/ ತೆಗೆದುಕೊಳ್ಳುವ ಆಟ, ಸೀತೆ ಆಟ, ಅರಸನ ಆಟ, ಅರಸ-ಒಕ್ಕಲು ಆಟ, ಕಟ್ಟೆ ಮನೆ ಆಟ, ಮೂಲೆ ಮನೆ ಆಟ ಇತ್ಯಾದಿ. ಒಬ್ಬರೇ ಆಡುವುದಾದರೆ ಸೀತೆ ಆಟ, ಎಂದೂ ಮುಗಿಯದ ಆಟಗಳಿವೆ. ಇಬ್ಬರು ಆಡುವುದಾದರೆ ಸಾದಾ ಆಟ, ಹೆಗ್ಗೆ ಆಟ, ತಿಂಬಾಟ, ಮೂಲೆಮನೆ ಆಟ ಇತ್ಯಾದಿ. ೩ ಜನ ಆಡುವುದಾದರೆ ಅರಸ-ಒಕ್ಕಲು / ಅರಸ-ಮಂತ್ರಿ-ಜನರ ಆಟ. 

ಇದರಲ್ಲಿ ಉಪಯೋಗಿಸುವ ನುಡಿಗಟ್ಟುಗಳು ಸಹ ಅಷ್ಟೇ ವೈವಿಧ್ಯಮಯ.. ದತ್ತ ಸರಿ ಇರಬೇಕು, ಪತ್ತ ತೆಗೆದುಕೊಳ್ಳುವುದು, ಕರು ಹಾಕುವುದು, ಹೆಗ್ಗಣ ಆದ ಗೋಣಿ, ಬೀಜ ಬಿತ್ತಿ, ಬೆಳೆ ತೆಗೆದುಕೊಳ್ಳುವುದು, ಹರಳು ಹಾಕಿ ತೆಗೆದುಕೊಳ್ಳುವುದು, ಪೋಕಿಣಿ ಮಾಡುವುದು, ಸರಿಮನೆ/ಸರ್ಮನೆ ಆಗುವುದು, ಕರು ಕೊಳೆಯುವುದು. 

ಆಟ ಆಡುವಾಗ ಆ ಸಾಲಿನಲ್ಲಿ ಆದ ಕರುಗಳನ್ನು ಆಯಾ ಆಟಗಾರರು ತೆಗೆದುಕೊಳ್ಳಬೇಕು. ಅಪ್ಪಿ ತಪ್ಪಿ ತೆಗೆದು ಕೊಳ್ಳದಿದ್ದರೆ ಕರು ಕೊಳೆತು ಹೋಗಿರತ್ತದೆ. ಆಮೇಲೆ ತೆಗೆದು ಕೊಳ್ಳಲು ಬರುವುದಿಲ್ಲ. ಎದುರಾಳಿ ಗಮನಿಸಿಯೂ ಸುಮ್ಮನಿದ್ದು ಬಿಡುವನು. ಆದ್ದರಿಂದ ಈ ಆಟದಲ್ಲಿ ಗಮನಿಸುವಿಕೆ, ಚುರುಕುತನ, ಕಣ್ಣೋಟ ಕೈ ಚಳಕ , ಬುದ್ಧಿಗೆ ಕಸರತ್ತು ಎಲ್ಲವೂ ಬೇಕಾಗುತ್ತದೆ. 

ಅಳುಗುಳಿಮನೆಯನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಮಕ್ಕಳಿಗೆ ಕೂಡುವ, ಕಳೆಯುವ, ಗುಣಿಸುವ ಮತ್ತು ಭಾಗಿಸುವ ಅಂಶಗಳ (fractions ) ಪರಿಕಲ್ಪನೆಯನ್ನು ಚೆನ್ನಾಗಿ ಮನದಟ್ಟು ಮಾಡಿಸಬಹುದು. ಅದಕ್ಕೆ ನಮ್ಮ ಹಿಂದಿನವರು ಮಿದುಳಿನಲ್ಲಿ ಲೆಕ್ಕ ಮಾಡುವುದರಲ್ಲಿ ಚುರುಕಿದ್ದರು.

ಪದಗಳ ಸಮಾನಾರ್ಥ:

ಮಣೆ - ೫-೭ ಗುಳಿಗಳಿರುವ ಆಟಿಕೆಯ ವಸ್ತು. ಇದು ಮರ, ಹಿತ್ತಾಳೆ, ಕಲ್ಲಿನದು ಆಗಿರಬಹುದು. ಎರಡು ಬದಿಯಲ್ಲಿ ೭ ರಂತೆ , ಒಟ್ಟು ೧೪ ಗುಳಿಗಳು ಇರುತ್ತದೆ.

ಹೆಗ್ಗ - ಹರಳು ಗುಳಿಯ ಆಟದಲ್ಲಿ ಹೆಚ್ಚು ಹರಳುಗಳಿಂದ ತುಂಬಿದ ಗುಳಿ. 

ಪೆಗ್ಗ - ಪೆರ್ಗ ಅಂತಲೂ ಕರೆಯುತ್ತಾರೆ. ಸಂಗ್ರಹ ವಾದ ಗುಳಿಯ ಕಾಯಿಗಳು. 

ಪತ್ತ / ಪಣತ - ಸಂಗ್ರಹ ಯೋಗ್ಯವಾದ ಗುಳಿಯ ಕಾಯಿಗಳು. ಒಂಟಿ ಪತ್ತ ಅಂತ ಕರೆಯುವುದು ಉಂಟು. 

ಜೋಡಿ  ಪತ್ತ - ಸಂಗ್ರಹ ಯೋಗ್ಯವಾದ ಗುಳಿ ಮತ್ತು ಅದರ ಎದರು ಮನೆಯ ಗುಳಿಯಲ್ಲಿರುವ ಕಾಯಿಗಳು 

ಗುಳಿ - ಗುಂಡಿಗಳಿಗೆ ಇರುವ ಪ್ರಾದೇಶಿಕ ಹೆಸರುಗಳು. ಗುಂತಲು, ಕುಳಿ, ಗೋಟು,ಗುಣಿ , ಹಳ್ಳ , ಮನೆ ಎಂತಲೂ ಕರೆಯುವುದು ಇದೆ. 

ಬಿತ್ತು - ಕಾಳುಗಳನ್ನು ಒಂದೊಂದೇ ಮನೆಗೆ ಹಾಕುವ ರೀತಿಗೆ ಬಿತ್ತುವುದು (sow). ಕಾಯಿ ಹಾಕುವುದು, ಬೀಜ ಬಿತ್ತುವುದು ಎಂದು ಸಾಮಾನ್ಯವಾಗಿ ಹೇಳುತ್ತಾರೆ.

ಬಿತ್ತುರಳಿ - ಕೊನೆಯಲ್ಲಿ ಒಂದು ಗುಳಿ ತುಂಬಲು ಬೇಕಾದ ೫  ಅಥವಾ ೫ ಕ್ಕಿಂತ ಕಮ್ಮಿ ಕಾಯಿಗಳು ಇದ್ದಾರೆ ಒಂದೊಂದೇ ಕಾಳುಗಳನ್ನು ಗುಳಿಗಳಿಗೆ ಹಾಕಿ  ಆಡುವುದು. 

ಕರು - ಆಟ ಆಡಲು ಶುರು ಮಾಡಿದ ಮೇಲೆ ಯಾವ ಗುಳಿಯಲ್ಲಿ ೪ ಕಾಯಿಗಳು ಒಟ್ಟಾದಾಗ ಕರು ಎನ್ನುತ್ತೇವೆ. ಪಶು ಎಂದು ಆಂಧ್ರ ಕಡೆ, ಪಸು ಎಂದು ತಮಿಳ್ನಾಡಿನ ಕಡೆಗೆ ಕರೆಯುತ್ತಾರೆ.  ಕರು ಕಟ್ಟಿದೆ, ಕರುಹಾಕಿದೆ, ಕರು ಹಾಕ್ತು, ಎಂದು ಸಾಮಾನ್ಯವಾಗಿ ಹೇಳುತ್ತಾರೆ.

  • ಆಟವನ್ನು  ೪ ಕಾಯಿಗಳಿಂದ ಆಡಿದ್ದರೇ, ೪ ಕಾಯಿಗಳು ಒಟ್ಟಾದಾಗ ಕರು ಆಗಿರುತ್ತದೆ. 
  • ಆಟವನ್ನು  ೫ ಕಾಯಿಗಳಿಂದ ಆಡಿದ್ದರೇ, ೫ ಕಾಯಿಗಳು ಒಟ್ಟಾದಾಗ ಕರು ಆಗಿರುತ್ತದೆ. 
  • ಆಟವನ್ನು  ೬ ಕಾಯಿಗಳಿಂದ ಆಡಿದ್ದರೇ, ೬ ಕಾಯಿಗಳು ಒಟ್ಟಾದಾಗ ಕರು ಆಗಿರುತ್ತದೆ.
  •  ಆಟವನ್ನು ೧೨ ಕಾಯಿಗಳಿಂದ ಆಡಿದ್ದರೇ, ೬ ಕಾಯಿಗಳು ಒಟ್ಟಾದಾಗ ಕರು ಆಗಿರುತ್ತದೆ.

ಪಿಗ್ಗಿ  -  ಆಟ ಆದ ಮೇಲೆ ಮುಂದಿನ ಸುತ್ತಿನ ಆಟಕ್ಕೆ , ಒಬ್ಬ ಆಟಗಾರನ ಹತ್ತಿರ ಗುಳಿ ತುಂಬಲು ಬೇಕಾದ ಆಟಕ್ಕಿಂತ ಕಮ್ಮಿ ಕಾಯಿಗಳುಇದ್ದರೆ, ಆ ಗುಳಿಯನ್ನು ಹಾಗೆಯೇ ಖಾಲಿಬಿಡಲಾಗುತ್ತದೆ. ಖಾಲಿ ಗುಳಿಗಳಿಗೆ ಪಿಗ್ಗಿ ಎಂದು ಕರೆಯುತ್ತಾರೆ. ಪಿಗ್ಗಿಯನ್ನು ಆಟಕ್ಕೆ  ಉಪಯೋಗಿಸುವುದಿಲ್ಲ. ನಮ್ಮಲ್ಲಿ ಪಿಗ್ಗಿ  ಗುಳಿಯನ್ನು ಗುರುತಿಸಲು ಒಂದು ಬಣ್ಣದ ಕಲ್ಲನ್ನು ಇಡುತ್ತೇವೆ. 

೧. ಸಾದಾ ಆಟ 

ಬಹು ಪ್ರಚಲಿತದಲ್ಲಿ ಇರುವುದು ಈ ಆಟ. ತುಂಬಾ ಹೆಚ್ಚು ಕಾಯಿಗಳನ್ನು ಸಂಗ್ರಹಿಸುವುದು ಈ ಆಟದ ಮುಖ್ಯ ಗುರಿ. ಕರು ತೆಗೆದುಕೊಳ್ಳುವುದು ಈ ಆಟದಲ್ಲಿ ಇರುತ್ತದೆ. ಆಟಕ್ಕೆ ಮುಂಚೆನೇ ಜೋಡಿ ಪತ್ತ ಇದೆಯೋ?  ಅಥವಾ ಬರಿ ಪತ್ತವೊ ? ಅಥವಾ ಒಂದ್ ಕಾಳು ಪತ್ತವೊ ಎಂದು ಮಾತಾಡಿಕೊಳ್ಳಬೇಕು (ಇದು ಯಾವ ಯಾವ ರೀತಿ ಕಾಯಿಗಳನ್ನು ಸಂಗ್ರಹಿಸಬಹುದು / ಬಾಚಿಕೊಳ್ಳಬಹುದು ಅಂತ ಮಾರ್ಗಸೂಚಿ ಇದ್ದ ಹಾಗೆ).  ಆಟ ಆಡುವಾಗ, ಒಬ್ಬಆಟಗಾರನಿಗೆ ೫ ಅಥವಾ ೫ ಕ್ಕಿಂತ ಕಮ್ಮಿ ಬಂದರೆ “ಬಿತ್ತುರುಳಿ ಮನೆ ಆಟ“ ರೀತಿಯಲ್ಲಿ ಆಡಿ ಮುಗಿಸಬೇಕು. ಒಮ್ಮೆ ಆಟ ಆಡುವಾಗ, ಇಬ್ಬರೂ ಆಟಗಾರರಿಗೆ ಸಮ-ಸಮ ಕಾಯಿಗಳು ಬಂದರೆ, “ಸರಿ ಮನೆ ಆಟ” ರೀತಿಯಲ್ಲಿ ಆಡಿ ಮುಗಿಸಬೇಕು. ಆಡಲು ಇಬ್ಬರು ಬೇಕು. ೭ ಗುಣಿಯ ಮನೆಗೆ ೭೦ ಕಾಯಿಗಳು ಇರಬೇಕು.

  1. ಪ್ರತಿಯೊಂದು ಮನೆಗೆ ೫ ಕಾಳುಗಳನ್ನು ಹಾಕಬೇಕು. ಒಂದು ಬದಿಯ ೭ ಮನೆಗಳು ಒಬ್ಬರಿಗಾದರೆ, ಇನ್ನೊಂದು ಬದಿಯ ೭ ಮನೆಗಳು ಎದುರಾಳಿಗೆ. 
  2. ಆಟಗಾರ ೧ - ಅವರ ಬದಿಯ ಒಂದು ಮನೆಯಿಂದ ಅಪ್ರದಕ್ಷಿಣಕಾರವಾಗಿ ಮುಂದಿನ ಮನೆಗಳಿಗೆ ಒಂದೊಂದು ಕಾಯಿಯನ್ನು ಹಾಕುತ್ತ ಬರಬೇಕು. ಖಾಲಿಯಾದ ಮನೆಯ ಮುಂದಿನ ಮನೆಯ ಕಾಯಿಗಳನ್ನು ತೆಗೆದುಕೊಂಡು ಮತ್ತೆ  ಎಲ್ಲ ಮನೆಗಳಿಗೆ ಹಾಕುತ್ತ ಬರಬೇಕು. 
  3. ಕೈಯಲ್ಲಿ ಕಾಳು ಖಾಲಿಯಾದಾಗ, ಮುಂದಿನ ಮನೆ ಖಾಲಿ ಇದ್ದರೆ, ಅದನ್ನು ಒಮ್ಮೆ ಸವರಿ ಅದರ ಮುಂದಿನ ಮನೆಯಲ್ಲಿ ಇರುವ ಅಷ್ಟು ಕಾಳುಗಳನ್ನು ತೆಗೆದುಕೊಂಡು ಎದುರಾಳಿಗೆ ಆಟವನ್ನು ಬಿಟ್ಟು ಕೊಡಬೇಕು. 
  4. ಒಮ್ಮೆ, ಕೈಯಲ್ಲಿಕಾಳು ಖಾಲಿಯಾಗಿದ್ದು, ಮುಂದಿನ ಮನೆ ಖಾಲಿ ಇದ್ದು, ಅದರ ಮುಂದಿನ ಮನೆನೂ ಖಾಲಿ ಇದ್ದಾರೆ ಆಟಗಾರನಿಗೆ ಯಾವ ಪತ್ತವೂ ಸಿಗುವುದಿಲ್ಲ. 
  5. ಆಟ ಆಡುವಾಗ ಆ ಸಾಲಿನಲ್ಲಿ ಆದ ಕರುಗಳನ್ನು ಆಯಾ ಆಟಗಾರರು ತೆಗೆದುಕೊಳ್ಳಬೇಕು. ಅಪ್ಪಿ ತಪ್ಪಿ ತೆಗೆದು ಕೊಳ್ಳದೆ, ಒಂದು ಕಾಳು ಬಿದ್ದರೆ ಕರು ಕೊಳೆತು ಹೋಗಿರತ್ತದೆ. ತೆಗೆದು ಕೊಳ್ಳಲು ಬರುವುದಿಲ್ಲ. ಎದುರಾಳಿ ಗಮನಿಸಿಯೂ ಸುಮ್ಮನಿದ್ದು ಬಿಡುವನು.
  6.  ಎದುರಾಳಿ ಆಟಗಾರನು ೩, ೪, ೫ ರಂತೆಯೇ ಆಟ ಆಡುವುದು. 
  7. ಒಟ್ಟಿನಲ್ಲಿ ಆಟ ಮುಗಿಯುವುದು ಯಾವಾಗ ಅಂದ್ರೆ, ಯಾವುದಾದರೂ ಒಂದು ಬದಿಯಲ್ಲಿ ಕಾಳುಗಳು ಖಾಲಿಯಾಗಬೇಕು. ಅಥವಾ ಒಂಟಿ ಮನೆಯಲ್ಲಿ ಕಾಯಿಗಳು ಇರಬೇಕು. 
  8. ಈಗ ಮತ್ತೆ ಅವರ ಹತ್ತಿರ ಇರುವ ಕಾಳುಗಳನ್ನು ಒಂದು ಕಡೆಯಿಂದ ೫-೫ ಕಾಯಿಗಳಂತೆ ಹಂಚಬೇಕು. ಒಬ್ಬ ಆಟಗಾರನ ಹತ್ತಿರ ಕೇವಲ ೫ ಮನೆಗಳಿಗೆ ಹಾಕುವಷ್ಟು ಮಾತ್ರ ಕಾಯಿಗಳು ಇದ್ದರೆ ಅಷ್ಟೇ ಮನೆಗೆ  i.e   ೫ ಗುಳಿಗಳಿಗೆ ಮಾತ್ರ ಕಾಯಿ ಹಾಕಬೇಕು. ಉಳಿದ ೨ ಗುಳಿಗಳನ್ನು ಪಿಗ್ಗಿ ಎಂದು ಕರೆಯಲಾಗುತ್ತದೆ. (ಪಿಗ್ಗಿಯನ್ನು ಗುರುತಿಸಲು ಬಣ್ಣದ ಕಲ್ಲುಗಳನ್ನು ಹಾಕಿ). ಉಳಿದ ಕಾಯಿಗಳನ್ನು ತನ್ನ ಹತ್ತಿರವೇ ಇಟ್ಟುಕೊಂಡಿರಬೇಕು. ಎದುರಾಳಿಯು ತನ್ನ ಎಲ್ಲ ಗುಳಿಗಳಿಗೆ ಕಾಯಿಯನ್ನು ಹಾಕಿ ಉಳಿದ ಕಾಯಿಗಳನ್ನು ತನ್ನ ಹತ್ತಿರವೇ ಇಟ್ಟುಕೊಂಡಿರುತ್ತಾರೆ. 

ಉದಾ: ಒಂದು ಸುತ್ತು ಸಾದಾ ಆಟ ಆದ ಮೇಲೆ, ಆಟಗಾರ ೧ ಹತ್ತಿರ ೨೬ ಕಾಯಿಗಳು, ಆಟಗಾರ ೨ ಹತ್ತಿರ ೪೪ ಕಾಯಿಗಳು ಇದೆ ಅಂತ ಇಟ್ಟುಕೊಳ್ಳೋಣ. ಆಟಗಾರ೧ ಕೇವಲ ೫ ಮನೆಗಳಿಗೆ ೫ ರಂತೆ ಕಾಯಿಗಳನ್ನು ಹಾಕಿ, ಒಂದು ಕಾಯಿ ತನ್ನ ಹತ್ತಿರ ಇಟ್ಟು ಕೊಂಡಿರುತ್ತಾನೆ. ಆಟಗಾರ೨ ಕೂಡ ೫ ಮನೆಗಳಿಗೆ ೫ ರಂತೆ ಕಾಯಿಗಳನ್ನು ಹಾಕಿ, ಉಳಿದ ೧೯ ಕಾಯಿಗಳನ್ನ   ತನ್ನ ಹತ್ತಿರ ಇಟ್ಟು ಕೊಂಡಿರುತ್ತಾನೆ. 

ಈಗ ಗೆದ್ದವರು ಈಗ ಆಟ ಮತ್ತೆ ೩,೪,೫ ರಂತೆಯೇ ಆಡುವುದು, ಆಟ ಮುಗಿಯುವ ತನಕ. 

  1. ಹೀಗೆಯೇ ಸುಮಾರು ಸಲ ಆಡುತ್ತಾ ಎಲ್ಲ ಕಾಯಿಗಳು ಒಬ್ಬರ ಹತ್ತಿರ ಬರಬೇಕು. ಅವರು ಗೆದ್ದಂತೆ!
  2. ಆಟ ಒಮ್ಮೊಮ್ಮೆ ೫-೧೦ ನಿಮಿಷದಲ್ಲಿ ಮುಗಿಯುವುದು ಇದೆ. ಕೆಲವೊಮ್ಮೆ ಗಂಟೆಗಟ್ಟಲೆ ಎಳೆಯುವುದು ಇದೆ. 

ಆಟ ಬದಲಾಗುವುದು ಯಾವಾಗ? 

  • ಆಟವಾಡುವಾಗ ಇಬ್ಬರಿಗೂ ಸರಿಸಮಾನವಾದ ಬೀಜಗಳು ಬಂದರೆ “ಸರಿಮನೆ” ಸಂಪತ್ತು ಅಂತ ಹೇಳುತ್ತಾರೆ. ಮತ್ತೆ  “ಸರಿಮನೆ ಸಂಪತ್ತು ಆಟ” ಆಡುತ್ತಾರೆ. ಇದರಲ್ಲಿ ಎಲ್ಲ ಮನೆಗೆ ೫ ಕಾಳುಗಳನ್ನು ಹಾಕಬೇಕು. ಒಂದೊಂದೇಕಾಳುಗಳನ್ನು ಎತ್ತಿಇಡುವ ಹಾಗಿಲ್ಲ. ಬದಲಾಗಿ ಒಂದು ಗುಳಿಯಿಂದ ಇನ್ನೊಂದು ಗುಳಿಗೆ ಕಾಯಿಗಳನ್ನು ಹಾಕುತ್ತ ಆಡುತ್ತಿದ್ದರು. ಇದರಲ್ಲಿ ಕರು ಬಾಚುವುದು ಇರುವುದಿಲ್ಲ. 
  • ಆಟವಾಡುವಾಗ, ಒಬ್ಬ ಆಟಗಾರನ ಹತ್ತಿರ ೫ ಅಥವಾ ೫ ಕ್ಕಿಂತ ಕಮ್ಮಿ ಕಾಯಿಗಳು ಇದ್ದರೆ, ಇರುವ ಅಷ್ಟು ಕಾಯಿಗಳು ಮುಖ್ಯ. (ಬೀಜ ಹುಷಾರಾಗಿ ಬಿತ್ತು ಉಳಿ ಮಾಡಿ ಅನ್ನುವ ಅರ್ಥದಲ್ಲಿ ) “ಬಿತ್ತುರುಳಿ ಮನೆ ಆಟ” ಆಡಬೇಕು. ಇಲ್ಲಿ ಒಂದು ಗುಳಿಗೆ ಒಂದರಂತೆ ಒಟ್ಟು ೫ ಗುಳಿಗಳಿಗೆ ಬಿತ್ತಬೇಕು/ಹಾಕಬೇಕು. ಎದುರಾಳಿಯು ಸಹ ಒಟ್ಟು ೫ ಕಾಯಿಗಳನ್ನು ೫ ಗುಳಿಗಳಿಗೆ ಹಾಕಬೇಕು. ಇದರಲ್ಲಿ ಕರು ಬಾಚುವುದು ಇರುವುದಿಲ್ಲ. ಮುಂದೆ ಆಟ ಮಾಮೂಲಿ ಸಾದಾ ಆಟದಂತೆಯೇ. 

ಗಮನಿಸಿ: ಈ ಆಟವನ್ನು ಉತ್ತರ ಕರ್ನಾಟಕದಲ್ಲಿ, ತುಳು ಪ್ರಾಂತ್ಯದಲ್ಲಿ  ೪/೫ ಕಾಯಿಗಳೊಂದಿಗೆ, ಮೈಸೂರು, ದಕ್ಷಿಣ ಕನ್ನಡ ಮತ್ತು ಕರಾವಳಿ  ಪ್ರದೇಶದಲ್ಲಿ ೫ ಕಾಯಿಗಳೊಂದಿಗೆ, ತಮಿಳ್ನಾಡು ಮತ್ತು ಆಂಧ್ರದ ಕಡೆ ೬ ಕಾಯಿಗಳೊಂದಿಗೆ ಆಡುವುದು ಬಳಕೆಯಲ್ಲಿ ಇದೆ. 

೨. ಕರು ಬಾಚುವ ಆಟ 

  1. ಈ ಆಟವನ್ನು ಕರು ತೆಗೆದುಕೊಳ್ಳುವ, ಕರು ಹುಟ್ಟಿಸುವ , ಕರು ಬರುವ ಆಟ ಎಂದೆಲ್ಲ ಕರೆಯುತ್ತಾರೆ. ಕೆಲಕಡೆ  ಎಮ್ಮೆ ಇಯೋದು ಅಂತ ಕರೆಯುತ್ತಾರೆ.
  2. ಆಡಲು ಇಬ್ಬರು ಬೇಕು. ೭ ಗುಣಿಯ ಮನೆಗೆ ೫೬ ಕಾಯಿಗಳು ಇರಬೇಕು.
  3. ಪ್ರತಿಯೊಂದು ಮನೆಗೆ ೪ ಕಾಳುಗಳನ್ನು ಹಾಕಬೇಕು. ಒಂದು ಬದಿಯ ೭ ಮನೆಗಳು ಒಬ್ಬರಿಗಾದರೆ, ಇನ್ನೊಂದು ಬದಿಯ ೭ ಮನೆಗಳು ಎದುರಾಳಿಗೆ.
  4. ಆಟಗಾರ ೧ ಯಾವುದಾದರೊಂದು  ಮನೆಯಿಂದ ಕಾಳುಗಳನ್ನು ತೆಗೆದು ಒಂದೊಂದೇ ಕಾಳುಗಳನ್ನು ಒಂದು ಮನೆಯೊಳಗೆ ಹಾಕುತ್ತ ಅಪ್ರದಕ್ಷಿಣವಾಗಿ ಸಾಗಬೇಕು. 
  5. ಯಾವ ಮನೆಯಲ್ಲಿ ಕೈಯಲ್ಲಿರುವ ಕಾಳುಗಳು ಮುಗಿಯುತ್ತದೆಯೋ, ಆ ಮನೆಯ ಕಾಳುಗಳನ್ನು ತೆಗೆದು ಆಡುತ್ತ ಹೋಗಬೇಕು. ಇಲ್ಲಿ ಪತ್ತ  ತೆಗೆದುಕೊಳ್ಳುವುದು ಇರುವುದಿಲ್ಲ. (ಗಮನಿಸಿ: ಸಾದಾ ಆಟದಲ್ಲಿ ಮುಂದಿನ ಮನೆಯ ಕಾಳುಗಳನ್ನು ತೆಗೆದು ಹಂಚುತ್ತೇವೆ. ಮತ್ತು ಪತ್ತ ಇರುತ್ತದೆ. )
  6. ಆಟ ಆಡುತ್ತಿರವಾಗ, ಯಾವುದಾದರೂ ಬದಿಯಲ್ಲಿ, ಮನೆಯಲ್ಲಿ ೪ ಕಾಳುಗಳು ಆದ್ರೆ , ಆಟಗಾರ ತೆಗೆದು ಕೊಳ್ಳುತ್ತಾನೆ. 
  7. ಕರು ಯಾವ ಬದಿಯಲ್ಲೂ ಆದರೂ, ಆಡುತ್ತಿರುವ ಆಟಗಾರ ತೆಗೆದುಕೊಳ್ಳಬಹುದು. 
  8. ಸನ್ನಿವೇಶ ೧: ಆಡುವಾಗ ಕೈಯಲ್ಲಿ ಒಂದು ಕಾಳಿರಬಹುದು, ಮುಂದಿನ ಮನೆ ಖಾಲಿಯಿರಬಹುದು. ಆಗ ಖಾಲಿ ಮನೆಯಲ್ಲಿ ಕಾಳು ಹಾಕಿ , ಎದುರಾಳಿಗೆ ಆಟ ಬಿಟ್ಟು ಕೊಡಬೇಕು.
  9. ಸನ್ನಿವೇಶ ೨: ಕೈಯಲ್ಲಿ ಒಂದು ಕಾಳಿದೆ, ಮುಂದಿನ ಮನೆಯಲ್ಲಿ ೩ ಕಾಯಿಗಳು ಇದೆ. ಅದರ ಮುಂದಿನ ಮನೆ ಖಾಲಿ ಇದೆ ಎಂದು ಕೊಳ್ಳಿ . ಆಗ ಕಾಳನ್ನು ಮುಂದಿನ ಮನೆಗೆ ಹಾಕಿದಾಗ ಕರು ಹುಟ್ಟುತ್ತದೆ. ಆ ಕರುವನ್ನು ಎತ್ತಿಕೊಂಡು ಎದುರಾಳಿಗೆ ಆಟವನ್ನು  ಬಿಡಬೇಕು.
  10. ಆಟ ಆಡುವ ಅವಸರದಲ್ಲಿ ಕರು ಎತ್ತಿಕೊಳ್ಳುವುದು ಮರೆತರೆ ಅಥವಾ ಇನ್ನೊಂದು ಕಾಯಿ ಹಾಕಿಬಿಟ್ಟರೆ, ಕರು ಕೊಳೆತು ಹೋಗುತ್ತದೆ. ಇದನ್ನು ಯಾರು ತೆಗೆದುಕೊಳ್ಳಲು ಬರುವುದಿಲ್ಲ. ಇದನ್ನು ಕರು ಕೊಳೆಯುವುದು ಎನ್ನುತ್ತಾರೆ.
  11. ಎದುರಾಳಿ ಆಟಗಾರನು ಕರು ಆಗಿದ್ದು ನೋಡಿ ಸುಮ್ಮನಿರುವನು. (ಅವನಿಗೆ ಮತ್ತಷ್ಟು ಕಾಯಿಗಳನ್ನು ಬಾಚಿಕೊಳ್ಳಲು ಒಂದು ಅವಕಾಶ ಅಲ್ಲವೇ. )
  12. ಆಟದ ಸುತ್ತು ಮುಗಿದ ಮೇಲೆ, ಎಲ್ಲ ಕರು ಕಾಯಿಗಳನ್ನು ಅವರ ಅವರ ಮನೆಗೆ ತುಂಬುವರು. ಕಮ್ಮಿ ಕರು ಕಾಯಿಗಳ ಪಡೆದವರ ಬದಿಯಲ್ಲಿ ಕೆಲ ಮನೆಗಳು ಖಾಲಿ ಹಾಗೆಯೇ ಇರುತ್ತದೆ. ಆಟಕ್ಕೆ ಉಪಯೋಗಿಸುವಂತೆ ಇಲ್ಲ. ಉದಾ: ಆಟಗಾರ ೧ ಹತ್ತಿರ ೧೯ಕಾಳುಗಳು ಇರುವುದು. ಆಟಗಾರ ೨ ಹತ್ತಿರ ೩೭ ಕಾಲುಗಳು ಇರುವುದು. ಆಟಗಾರ ೧ ಬದಿಯಲ್ಲಿ ೪ ಮನೆಗಳಿಗೆ ಮಾತ್ರ ಕಾಳುಗಳನ್ನು ಹಂಚಲು ಆಗವುದು. ಆಟಗಾರ ೨ ಬದಿಯಲ್ಲಿ ೭ ಮನೆಗೆ ಕಾಳುಗಳನ್ನು ಹಂಚುತ್ತಾನೆ.  ಒಟ್ಟು ೧೪ ಗುಳಿಗಳಲ್ಲಿ ಕೇವಲ ೧೧ ಗುಳಿಗಳಲ್ಲಿ ಆಟ ಆಡಬೇಕು. 
  13. ಆಟ ಮತ್ತೆ ೪-೧೨ ರಂತೆಯೇ ಮುಂದುವರಿಸಬೇಕು.
  14. ಒಮ್ಮೆ ಮುಂದಿನ ಸುತ್ತಿನಲ್ಲಿ ಹೆಚ್ಚು ಕರು ಪಡೆದರೆ,ಬಿಟ್ಟ ಗುಳಿಗಳನ್ನು ಸೇರಿಸಿ ಆಡಬಹುದು. 
  15. ಹೆಚ್ಚು ಕರು ಪಡೆದವರು ಗೆದ್ದಂತೆ. 

ಈ ಆಟವನ್ನು ಸೂಕ್ಷ್ಮವಾಗಿ ಗಮನಿಸಿದರೆ ಮಗ್ಗಿಯನ್ನು ಕಲಿಸಲು ಒಂದು ಸುಲಭದ ವಿಧಾನ ಅಂತ ಅನ್ನಿಸದೇ ಇರದು. ೪,೫,೬ ಕಾಯಿಗಳ ಕರು ಆಟವನ್ನು ಪ್ರಾಯೋಗಿಕವಾಗಿ  ಮಗ್ಗಿಯನ್ನು ಹೇಳಿಕೊಡಲು  ಉಪಯೋಗಿಸಬಹುದು. 

೩. ಸೀತೆ ಆಟ

  1. ಇದನ್ನು ಬಹುವಾಗಿ ಸೀತೆಯ ಆಟ ಅಂತಲೇ  ಗುರುತಿಸುವುದು. ಸೀತೆಯು ಲಂಕೆಯ ಅಶೋಕವನದಲ್ಲಿ ಇದ್ದಾಗ , ಬೇಸರ ಕಳೆಯಲು, ರಾಮನನ್ನು ನೆನೆಯಲು ಈ ಆಟವನ್ನು ಆಡುತಿದ್ದಳು ಅನ್ನುವ ಪ್ರತೀತಿ ಇದೆ. 
  2.  ಒಬ್ಬರು ಸಾಕು ಆಡಲು. 
  3. ಒಂದು ಬದಿಯಲ್ಲಿ ಒಂದೊಂದು ಮನೆಗೆ ಕ್ರಮವಾಗಿ 7,6,5,4,3,2,1 ಕಾಯಿಗಳನ್ನು ಎಡದಿಂದ ಬಲಕ್ಕೆ ಹಾಕುತ್ತ ಬರಬೇಕು. ಮತ್ತೆ 7,6,5,4,3,2,1 ಕಾಯಿಗಳನ್ನ ಹಾಕುತ್ತ ಬರಬೇಕು. ಇಲ್ಲಿಗೆ ಆಟಕ್ಕೆ ಸಿದ್ಧತೆ ಮಾಡಿಕೊಂಡಂತೆ. 
  4. ಯಾವದಾದರೂ ಒಂದು ಮನೆಯಿಂದ ಕಾಯಿಗಳನ್ನು ಎತ್ತಿಕೊಂಡು ಮುಂದಿನ ಮನೆಗಳಿಗೆ ಹಂಚುತ್ತಾ ಹೋಗಬೇಕು. ಯಾವ ಮನೆಯಲ್ಲಿ ಕಾಳು ಖಾಲಿ ಆಗುತ್ತೋ, ಅದರ ಮುಂದಿನ ಮನೆಯಿಂದ ಕಾಳುಗಳನ್ನು ಎತ್ತಿ ಮತ್ತೆ ಹಂಚುತ್ತಾ ಹೋಗಬೇಕು. 
  5. ಈ ಆಟದಲ್ಲಿ ನಮಗೆ ಯಾವಾಗಲೂ ಕಾಳುಗಳು ದೊರೆಯುತ್ತಲೇ ಇರುತ್ತದೆ. ಅದೆಷ್ಟೋ ಸುತ್ತುಗಳು ಆದ ಮೇಲೆ ಕಾಳುಗಳು ತಮ್ಮ ತಮ್ಮ ಪ್ರಾಂಭದ ಮನೆಗೆ ಸೇರುತ್ತದೆ. 
  6. ಈ ಆಟದಲ್ಲಿ ಎಲ್ಲೂ ನಮಗೆ ಖಾಲಿ ಮನೆ ಸಿಗುವುದಿಲ್ಲ. 

ಹಾಗೆ ಸುಮ್ಮನೇ: ಎಷ್ಟು ಸುತ್ತು ಆದ ಮೇಲೆ ಮೊದಲ ಮನೆಗೆ ಕಾಲುಗಳು ಬರುತ್ತದೆ. ಇದು ಗಣಿತದ ಯಾವ ಅಂಶವನ್ನು ತೋರಿಸುತ್ತದೆ ?

 

- - ತನುಶ್ರೀ .ಎಸ್.ಏನ್ 

Back to blog

1 comment

ನಿಮ್ಮ ಲೇಖನ ತುಂಬಾ ಚೆನ್ನಾಗಿ ಮೂಡಿಬಂದಿದೆ. ಸ್ವಾರಸ್ಯಕರ ವಿವರಣೆ. ಧನ್ಯವಾದಗಳು.

ಸತೀಶ್ ಕುಮಾರ್

Leave a comment

Please note, comments need to be approved before they are published.