ಈ ಸಲ ಬೇಸಿಗೆ ರಜೆಯಲ್ಲಿ ನನ್ನ ಮಗಳಿಗೆ ತುಂಬಾ ಬೇಜಾರೂ. ಹೊರಗಡೆ ತುಂಬಾ ಬಿಸಿಲು ಆಡೋಕ್ಕೆ ಆಗೋಲ್ಲ. ಮನೆಯಲ್ಲಿ ಬೇರೆ ಏನಾದ್ರು ಚಟುವಟಿಕೆ ಮಾಡೋಣ ಅಂದ್ರೆ ಅದೂ ಬೇಜಾರು. ನಾವು ಚಿಕ್ಕವರಿದ್ದಾಗ ಏನು ಮಾಡ್ತಾಇದ್ವಿ ಅಂತಾ ಯೋಚನೆ ಮಾಡಿದಾಗ, ಬಾಲ್ಯದ ಸವಿನೆನಪುಗಳ ಫ್ಲಾಶ್ ಬ್ಯಾಕ್… ಮುಖದಲ್ಲಿ ಒಂದು ಮುಗುಳ್ನಗೆ, ಮನಸ್ಸು ಉಲ್ಲಸಿತ. ಏನಪ್ಪಾ ಅಂಥಾದ್ದು ಅಂತ ಯೋಚನೆ ಮಾಡ್ತಾ ಇದ್ದೀರಾ? ಅದುವೇ ಚೌಕಭಾರ. ಅವಳಿಗೆ ಚೌಕಭಾರ ಹೇಳಿಕೊಡೊಕ್ಕೆ ಒಳ್ಳೆ ಸಮಯ ಅಂತ ಕಾರ್ಯರೂಪಕ್ಕೆ ಇಳಿಸಿದೆ.
ನಮ್ಮ ಮನೆಯಲ್ಲಿ ಎಲ್ಲರೂ ಅಂದ್ರೆ ಅಕ್ಷರಶ: ಎಲ್ಲರೂ ಚೌಕಭಾರ ಪ್ರಿಯರೇ. ಕವಡೆಗಳು ಯಾವಾಗಲು ಇದ್ದೇ ಇರುತ್ತೆ. ಶುರುವಾಯಿತು ನಮ್ಮ ಹುಡುಕಾಟ. ಒಂದು ಮಣೆ ಮೇಲೆ ಸೀಮೆಸುಣ್ಣದಿಂದ ೫-ಮನೆ ಚೌಕಭಾರ ಚಿತ್ರ ಬರೆದಿದ್ದು ಆಯಿತು. ಮಗಳನ್ನು ಸೇರಿಸಿಕೊಂಡು ಅಡುಗೆ ಮನೆಗೆ ನುಗ್ಗಿದ್ದಾಯಿತು.. ಅಡುಗೆಮನೆ ಯಾಕೆ ಅಂತೀರಾ? ಬೇಕಲ್ಲ ಆಡೋಕ್ಕೆ ಕಾಯಿಗಳು. ೪- ಹುಣಸೆ ಬೀಜ, ೪-ಪಿಸ್ತಾ ಸುಲಿದ ಸಿಪ್ಪೆ , ೪-ಅಡಿಕೆ ಚೂರುಗಳು. ಇನ್ನೊಂದು ಕಾಯಿಗೆ ಏನು ಮಾಡುವುದು? ಶೇಂಗಾ ಬೀಜ, ಹುರುಗಡಲೆ ಕಾಳುಗಳು ಆಗೋಲ್ಲ, ಯಾಕಂದ್ರೆ ನನ್ ಮಗ ಗುಳುಕಾಯ ಸ್ವಾಹಾ ಮಾಡ್ತಾನೆ. ಅಡುಗೆ ಮನೆ ಬಿಟ್ಟು ಅಮ್ಮನ ಹೊಲಿಗೆ ಡಬ್ಬಕ್ಕೆ ಕೈ ಹಾಕಿ ೪-ಗುಂಡಿಗಳನ್ನು ಕಾಯಿಗಳಾಗಿ ಮಾಡಿದ್ದ್ವಿ .
ಅಕ್ಕ-ಪಕ್ಕದ ಮನೆ ಹುಡುಗರನ್ನ ಬನ್ರೋ ಚೌಕಭಾರ ಆಡೋಣ ಅಂತ ಕರೆದಿದ್ದು ಆಯ್ತು. ಆಟದ ನಿಯಮಗಳನ್ನು ಹೇಳ್ತೀನಿ ಕೇಳ್ರೋ ಅಂದ್ರೆ, ಆಂಟಿ ಆಟ ಆಡ್ತಾ ಹೇಳಿಕೊಡಿ ಅಂತಾರೆ. ‘ಇಟ್ ಮನೆ ಚಟ್’, ‘ಮುಟ್ಟಿದ ಮನೆ ಚಟ್’, ‘ಇಟ್ಟಿದ್ ಕಾಯ್ ಚಟ್’, ‘ಮುಟ್ಟಿದ್ ಕಾಯ್ ಚಟ್’, ‘ಮೂರು ನಾಲ್ಕು ಶ್ಯಾಮ್’, ‘ಮೂರು ಎಂಟು ಶ್ಯಾಮ್ ‘, ‘ಗಟ್ಟಿ ‘, ‘ಜೋಡಿ ಗಟ್ಟಿ ‘, ‘ಟೊಳ್ಳು ಗಟ್ಟಿ ‘, ‘ಸೀ ಕಾಯ್’ ಕೊಡುವುದು ಮುಂತಾದವು ಹೇಳಿದೆ. ಅಂತೂ ಇಂತೂ ಆಟ ಶುರುವಾಯಿತು. ಶುರುವಿನಿಂದಲೇ ಮಜಾ ಮಜಾ, ದೇವರಿಗೆ, ದಿಂಡರಿಗೆ, ನಮಗೆ ಅಂತ ಹೇಳಿ ಕವಡೆ ಹಾಕುವುದು. ಅಪ್ಪಿ ತಪ್ಪಿ ನಾಲ್ಕೋ, ಎಂಟೋ ಬಿದ್ದರೆ ನಮಗೆ ಅಂತ ಹೇಳೋದು, ಅಥವಾ ಮೂರು ಬಿದ್ದಿದ್ರೆ ನಾಲ್ಕು, ಒಂದು ಬಿದ್ದಿದ್ರೆ ಎಂಟು ಅಂತ ದಾರಿ ತಪ್ಪಿಸೋದ್ ಪ್ರಯತ್ನ ನಡಿತಾ ಇರುತ್ತೆ. ಇನ್ನೇನು ನಮಗೆ ಒಂದೇ ಒಂದ್ ಬಿದ್ರೆ ಆಟ ಮುಗಿಯುತ್ತೆ ಅಂತ ಇದ್ರೆ, ಸಾಲು ಸಾಲಾಗಿ ನಾಲ್ಕು ಎಂಟು ಬೀಳ್ತಾ ಇರುತ್ತೆ. ನಮ್ಮ ಚಡಪಡಿಕೇನು ಏರತಾ ಇರುತ್ತೆ. ಆಡೋಕ್ಕೆ ಶುರುಮಾಡಿ ೨ ಘಂಟೆಯಾದ್ರು ಮುಗಿದಿಲ್ಲ. ಎಲ್ಲರ ಮುಖದಲ್ಲೂ ಒಂಥರ ಉತ್ಸಾಹ, ಕಾತುರ. ಎಲ್ಲರಲ್ಲೂ, ಕಾಯಿಗಳನ್ನ ಹೊಡಿಬೇಕು, ನನ್ನ ಕಾಯಿಗಳನ್ನ ಹಣ್ಣು ಮಾಡಬೇಕು.. ಹೇಗೆ ಕಾಯಿಗಳನ್ನ ನೆಡಸಬೇಕು ಅನ್ನೋ ಲೆಕ್ಕಾಚಾರ. ಆಟ ಮುಗಿದಾಗ ಎಲ್ಲರ ಮೈ ಮನಸ್ಸು ಹಗುರ.. ಮತ್ತೊಮ್ಮೆ ಆಡೋಕ್ಕೂ ತಯಾರ್ !
ನಿಮ್ಮ ಹತ್ತಿರ ವಿಶಿಷ್ಟ/ವಿಶೇಷ ವಾದ ಚೌಕಭಾರ ಅನುಭವ ಇದ್ದರೆ ಹಂಚಿಕೊಳ್ಳಿ.
Originally posted here – https://www.facebook.com/tanushri.sn/posts/2111160608993532